ನಮ್ಮ ಬಗ್ಗೆ

ನಮ್ಮ ಬಗ್ಗೆ

ಪರಶುರಾಮ ಕ್ಷೇತ್ರವೆಂದೇ ಪ್ರಸಿದ್ದಿಯಾಗಿರುವ ಕರ್ನಾಟಕದ ಕರಾವಳಿಯಲ್ಲಿ ದುರ್ಗಾ ದೇವಿಯ ಅರಾಧನೆ ಬಹಳ ಪುರಾತನ ಕಾಲದಿಂದಲೂ ನಡೆದುಕೊಂಡು ಬಂದಿದೆ. ಅಂಥಹುದೇ ಒಂದು ಮಹತ್ವ ಹೊಂದಿರುವಂತಹ ದೇವಿ ದೇವಸ್ಥಾನಗಳಲ್ಲಿ ನಮ್ಮ ಶ್ರೀ ಮಹಿಷಮರ್ದಿನಿ ದೇವಸ್ಥಾನವು ಒಂದು. ಸುಮಾರು 800 ವರ್ಷಗಳ ಇತಿಹಾಸ ಹೊಂದಿರುವ ಈ ದೇವಸ್ಥಾನವು ಅಂಪಾರುಪುರದ ಅರಸನಾದ ನಂದೂರಾಯ ನ ಆಳ್ವಿಕೆ ಯಲ್ಲಿ ಪ್ರತಿಷ್ಠಾಪನೆಗೊಂಡಿ ತ್ತು. ಅಂದಿನಿಂದ ಇಂದಿನ ವರೆಗೆ ಬೇಡಿ ಬಂದ ಭಕ್ತರ ಇಷ್ಟಾರ್ಥಗಳನ್ನು ಪೂರೈಸುತ್ತಾ ತನ್ನ ಪರಿವಾರ ದೇವತೆಗಳಾದ ಶ್ರೀ ವೀರಭದ್ರ ಮತ್ತು ಶ್ರೀ ನಾಗದೇವರ ವಿಗ್ರಹಗಳೊಂದಿಗೆ ಇಲ್ಲಿಯೇ ನೆಲೆಗೊಂಡಿದ್ದಾಳೆ.

ಈಗ ಅಂಪಾರುಪುರವು ಅಂಪಾರು ಗ್ರಾಮವಾಗಿದೆ. ಹಿಂದಿನ ರಾಜರ ಕಾಲದ ಪಳೆಯುಳಿಕೆಗಳಾದ ಕೋಟೆಯು ಈ ಗ್ರಾಮದ ಸಮೀಪದಲ್ಲಿಯೇ ಇವೆ. ಕುಂದಾಪುರದಿಂದ ಸುಮಾರು 17 ಕಿ ಮೀ ದೂರದಲ್ಲಿ ಬಸ್ರೂರ್ ಕಂಡ್ಲುರ್ ಮಾರ್ಗವಾಗಿ ಸಿದ್ದಾಪುರ ಕ್ಕೆ ಹೋಗುವ ದಾರಿಯಲ್ಲಿ ಇರುವ ಈ ಅಂಪಾರು ಗ್ರಾಮ ಪ್ರಸಿದ್ಧ ಕ್ಷೇತ್ರವಾದ ಶಂಕರನಾರಾಯಣದಿಂದ 7 ಕಿ ಮೀ ದೂರದಲ್ಲಿ ಇದೆ. ಇಲ್ಲಿಂದ ಸುಮಾರು 34 ಕಿ ಮೀ ದೂರದಲ್ಲಿ ದೇವಿಯ ಇನ್ನೊಂದು ಪ್ರಸಿದ್ಧ ಕ್ಷೇತ್ರ ಕೊಲ್ಲೂರು ಇದೆ.

ರವಿರಾಜ್ ಭಟ್

ಅಂಪಾರಿನ ಶ್ರೀ ಮಹಿಷಮರ್ದಿನಿ ದೇವಸ್ಥಾನವು ಇದುವರೆಗೂ ಅನುವಂಶಿಕ ಆಡಳಿತ ಮೋಕ್ತೆಸರರ ಮೂಲಕವೇ ನಡೆಯುತ್ತಿದೆ. ಇಲ್ಲಿಯ ಪೂಜಾ ಕೈಂಕರ್ಯವು ಕೂಡಾ ಚೌಳಿಕೆರೆ ಮೂಲದವರಾದ ಅನಂತ ಭಟ್ಟರಿಂದ ಶುರುವಾಗಿ, ಅವರ ವಂಶಜರಿಂದಲೇ ಈ ವರೆಗು ನಡೆಯುತ್ತಾ ಬಂದಿದೆ. ದೈವಜ್ಞರಾದ ಅನಂತ ಭಟ್ಟರು ಸ್ವತಃ ಮಂತ್ರವಾದ ಕಲಿತ ಪ್ರಕಾಂಡ ಜ್ಯೋತಿಷಿಗಳಾಗಿದ್ದರು. ಅವರ ನಂತರ ಅವರ ಮಗ ಸುಬ್ರಾಯ ಭಟ್ಟರು ಸ್ವತಃ ನಾಗಪಾತ್ರಿಗಳಾಗಿದ್ದರು. ನಂತರ ಅವರ ಮಗ ಅನಂತ ಭಟ್ಟರು ಜ್ಯೋತಿಷ್ಯ ವೃತಿಯನ್ನೇ ಮುಂದುವರೆಸಿಕೊಂಡು ಶ್ರೀ ದೇವಿಯ ಪೂಜಾ ಕೈಕರ್ಯಕ್ಕೆ ಸಮರ್ಪಿತರಾಗಿದ್ದರು. ನಂತರ ಅವರ ಮಗ ಸುಬ್ರಾಯ ಭಟ್ಟರು ಕೂಡಾ ಪ್ರಸಿದ್ಧ ನಾಗ ಪಾತ್ರಿಗಳಾಗಿದ್ದರು. ನಂತರ ಅವರ ಮಗ ಗಣಪತಿ ಭಟ್ಟರು ದೇವಸ್ಥಾನದ ಹತ್ತಿರದಲ್ಲಿ ಕಲ್ಯಾಣಮಂಟಪವನ್ನು ಕಟ್ಟಿ ಅದರ ವ್ಯವಸ್ಥಾಪಕರಾಗಿ ಜೊತೆಗೆ ದೇವಿಯ ಪೂಜಾ ಕೈಂಕರ್ಯವನ್ನು ಯಾವುದೇ ಲೋಪ ಬಾರದ ರೀತಿಯಲ್ಲಿ ನಡೆಸಿಕೊಂಡು ಹೋಗುತಿದ್ದರು. ಅವರ ಕಾಲಾ ನಂತರ ಅವರ ಮಗ ಶ್ರೀ ರವಿರಾಜ್ ಭಟ್ ಅವರು ಆಡಳಿತವನ್ನು ವ್ಯವಸ್ಥಾಪಕ ಟ್ರಸ್ಟಿ ಆಗಿ ನಡೆಸಿಕೊಂಡು ಹೋಗುತ್ತಿದ್ದಾರೆ. ರವಿರಾಜ್ ಭಟ್ ಅವರು ಕೂಡಾ ಸ್ವತಃ ನಾಗ ಪಾತ್ರಿಗಳಾಗಿರುವುದರಿಂದ ಪ್ರಸ್ತುತ ಇಲ್ಲಿ ನಾಗರಾಧನೆ ಬಹಳ ವಿಶೇಷವಾಗಿ ನಡೆಯುತ್ತಿದೆ. ಜೊತೆಗೆ ದೇವಿಯ ಸಕಲ ಪೂಜೆಗಳು ಬಹಳ ವಿಜೃಂಭಣೆಯಿಂದ ನಡೆಯುವಲ್ಲಿ ರವಿರಾಜ್ ಭಟ್ ರ ಪಾತ್ರ ಬಹಳ ದೊಡ್ಡದು. ನಾಗಪಾತ್ರಿಗಳ ಜೊತೆ ಅವರು ಈ ಕ್ಷೇತ್ರದಲ್ಲಿ ಶ್ರೀ ವೀರಭದ್ರನ ಪಾತ್ರಿಗಳು ಕೂಡಾ ಆಗಿದ್ದಾರೆ. ಜೊತೆಗೆ ಜಾತಕ ಪರಿಶೀಲನೆ, ಪ್ರಶ್ನೆ ಹಾಕಿಸುವುದು ಮೊದಲಾದ ಹಲವು ಕಾರ್ಯಗಳಲ್ಲಿ ತೊಡಗಿರುತ್ತಾರೆ. ನಂಬಿ ಬರುವ ಭಕ್ತ ಜನರಿಗೆ ಸಕಲ ವ್ಯವಸ್ಥೆ ಮಾಡಿಕೊಟ್ಟು ಅವರ ಆಶೋತ್ತರಗಳನ್ನು ಪೂರೈಸುವಲ್ಲಿ ಸಕ್ರಿಯ ಪಾತ್ರ ವಹಿಸುತ್ತಾರೆ.

knKannada