ಶ್ರೀ ಮಹಿಷಮರ್ದಿನಿ ದೇವಿ
ಶ್ರೀ ಮಹಿಷಮರ್ದಿನಿ ದೇವಿ
ಸುಮಾರು 800 ವರ್ಷಗಳ ಹಿಂದೆ ರಾಜರ ಆಳ್ವಿಕೆಯಲ್ಲಿ ಪ್ರತಿಷ್ಠಾಪನೆಗೊಂಡಿರುವ ಅಂಪಾರಿನ ಶ್ರೀ ಮಹಿಷಮರ್ದಿನಿ ದೇವಿಯು ಈ ಕ್ಷೇತ್ರದ ಪ್ರಮುಖ ಆಕರ್ಷಣೆ. ಇಲ್ಲಿನ ವಿಗ್ರಹದ ವಿಶೇಷತೆ ಏನೆಂದರೆ ಇಲ್ಲಿನ ಮಹಿಷಮರ್ದಿನಿ ಎರಡೇ ಭುಜಗಳನ್ನು ಹೊಂದಿರುವುದು. ಸಾಮಾನ್ಯವಾಗಿ ಮಹಿಷಮರ್ದಿನಿ ಮತ್ತು ದುರ್ಗಾಪರಮೇಶ್ವರಿಯ ವಿಗ್ರಹಗಳೆಂದರೆ ಕೊನೆ ಪಕ್ಷ 4 ಭುಜಗಳನ್ನು ಹೊಂದಿರುತ್ತಾರೆ. ಈ ರೀತಿ ಎರಡೇ ಕೈಗಳಿರುವ ಮಹಿಷಮರ್ದಿನಿ ವಿಗ್ರಹ ಬೇರೆಲ್ಲೂ ಕಾಣ ಸಿಗುವುದು ಕಷ್ಟ. ಹಿಂದಿನಿಂದಲೂ ಆರಾಧಿಸಿಕೊಂಡು ಬಂದಿರುವ ಶ್ರೀ ದೇವಿಯ 400 ವರ್ಷಗಳಷ್ಟು ಹಳೆಯದಾದ ವಿಗ್ರಹವನ್ನು 2010ರಲ್ಲಿ ಬದಲಾಯಿಸಲಾಯಿತು. ಈಗಿನ ಆಡಳಿತ ವ್ಯವಸ್ಥಾಪಕ ಟ್ರಸ್ಟಿಯಾಗಿರುವ ಶ್ರೀ ರವಿರಾಜ್ ಭಟ್ ರ ನೇತೃತ್ವದಲ್ಲಿ ಈಗಿರುವ ಮಹಿಷಮರ್ದಿನಿ ವಿಗ್ರಹವನ್ನು ಅಷ್ಟಬಂಧ ಮಹಾ ಪ್ರತಿಷ್ಠೆ ಮಾಡಿ ಬ್ರಹ್ಮಕಲಶೋತ್ಸವದ ಮೂಲಕ ಪ್ರತಿಷ್ಟಾಪಿಸಲಾಯಿತು. ಅಂದಿನಿಂದ ಸಾಂಪ್ರದಾಯಿಕ ವಿಧಿ ವಿಧಾನಗಳೊಂದಿಗೆ ನಿತ್ಯ ಪೂಜೆ ಕೈಗೊಳ್ಳುತಿರುವ ಶ್ರೀ ದೇವಿಯು ಭಕ್ತಿಯಿಂದ ಪ್ರಾರ್ಥಿಸುವ ಭಕ್ತವೃಂದಕ್ಕೆ ತಾಯಿಯಂತೆ ರಕ್ಷಣೆ ನೀಡುತ್ತಿದ್ದಾಳೆ.
ಈ ದೇವಸ್ಥಾನದಲ್ಲಿ ಪ್ರತಿ ವರ್ಷ ನವರಾತ್ರಿ ಉತ್ಸವ ವರ್ಷದಿಂದ ವರ್ಷಕ್ಕೆ ವಿಜೃಂಭಣೆಯಿಂದ ನಡೆಯುತ್ತಿದೆ. ನವರಾತ್ರಿ ಒಂಬತ್ತು ದಿನ ವಿಶೇಷವಾಗಿ ಅಲಂಕಾರಗೊಳ್ಳುವ ದೇವಿ ವಿವಿಧ ಕಡೆಯಿಂದ ಬರುವ ಭಕ್ತರ ಆಕರ್ಷಣೆಯ ಕೇಂದ್ರಬಿಂದುವಾಗಿದ್ದಾಳೆ. ನವರಾತ್ರಿಯಲ್ಲಿ ವಿಶೇಷವಾಗಿ ಪಂಚಮಿಯಂದು ಪ್ರತಿ ವರ್ಷ ಚಂಡಿಕಾ ಹೋಮವನ್ನು ಆಯೋಜಿಸುತ್ತಾರೆ.ಹಾಗೆಯೇ ಪ್ರತಿ ವರ್ಷ ಜನವರಿ 26ರಂದು ನಡೆಯುವ ಶ್ರೀ ದೇವಸ್ಥಾನದ ವರ್ಧಂತಿ ಉತ್ಸವವು ಕೂಡ ಹಲವಾರು ವಿಪ್ರರ ಸಹಯೋಗದೊಂದಿಗೆ ವಿಜೃಂಭಣೆಯಿಂದ ನಡೆಯುತ್ತದೆ. ಶ್ರಾವಣ ಮಾಸದಲ್ಲಿ ಸೋಣೆ ಆರತಿ ಮೊದಲಾದ ವಿವಿಧ ಸೇವೆಗಳು ಭಕ್ತರ ವಿವಿಧ ಹರಕೆಗಳ ಪ್ರತೀಕವಾಗಿವೆ.